ಟ್ರೋಪೀಯಲಮ್
	ಟ್ರೋಪೀಯಲೇಸೀ ಕುಟುಂಬಕ್ಕೆ ಸೇರಿದ ಒಂದು ಮೂಲಿಕೆ ಸಸ್ಯ. ಇದರ ಹೂಗಳು ಬಹಳ ಅಂದವಾಗಿರುವುದರಿಂದ ಅಲಂಕಾರಕ್ಕಾಗಿ ತೋಟಗಳಲ್ಲಿ, ಮಡಿಗಳ ಅಂಚುಗಳಲ್ಲಿ. ರಾಕರಿಗಳಲ್ಲಿ ಮತ್ತು ತೂಗುಬುಟ್ಟಿಗಳಲ್ಲಿ ಬೆಳೆಸಲಾಗುತ್ತದೆ. ಇದಕ್ಕೆ ನಸ್ಟರ್ಷಮ್ ಎಂಬ ಹೆಸರೂ ಉಂಟು. ಇದೊಂದು ಜನಪ್ರಿಯ ವಾರ್ಷಿಕ ಸಸ್ಯ ; 20-30ಸೆಂ.ಮೀ. ಎತ್ತರಕ್ಕೆ ಬೆಳೆಯುತ್ತದೆ. ತುಂಬ ಗಟ್ಟಿಮುಟ್ಟಾದುದು. ಇದರ ಬೇರುಗಳು ಮೂಲಂಗಿ ಆಕಾರದವು. ಕೆಲವು ಸಲ ಆಲೂಗಡ್ಡೆಯಂತಿರುವುದೂ ಉಂಟು. ಎಲೆಗಳು ಸರಳ; ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಯ ತೊಟ್ಟು ಬಲು ಉದ್ದ. ಎಲೆಯಲಗಿನ ಆಕಾರ ಗುರಾಣಿಯಂತೆ. ಅಂಚು ಅಖಂಡವಾಗಿರಬಹುದು ಇಲ್ಲವೆ ಹಲವಾರು ಹಾಲೆಗಳಾಗಿ ವಿಭಾಗಗೊಂಡಿರಬಹುದು. ಹಾಲೆಗಳು ಹಸ್ತಾಕೃತಿಯಲ್ಲಿ ಚಾಚಿಕೊಂಡಿರುವುವು. ಹೂಗಳು ಒಂಟೆಂಟಿಯಾಗಿ ಎಲೆಗಳ ಕಂಕುಳಲ್ಲಿ ಅರಳುತ್ತವೆ. ಇವು ದೊಡ್ಡವೂ ಹಳದಿ, ಕಿತ್ತಳೆ, ಕೆಂಪು, ಊದಾ, ನೀಲಿ ಮುಂತಾದ ಬಣ್ಣಗಳುಳ್ಳವೂ ಆಗಿವೆ. ಪುಷ್ಪಪತ್ರಗಳು 5 ; ಬುಡಭಾಗದಲ್ಲಿ ಪರಸ್ಪರ ಅಂಟಿಕೊಂಡಿವೆ. ಇವುಗಳಲ್ಲಿ ಮೇಲ್ಭಾಗದ್ದು (ಬೆನ್ನು ಭಾಗದ್ದು) ಪೊಳ್ಳುಕೊಳವೆಯ (ಸ್ಪರ್) ರೂಪದಲ್ಲಿ ಚಾಚಿಕೊಂಡಿದೆ. ದಳಗಳು 5, ಕೆಲವೊಮ್ಮೆ ಕಡಿಮೆ ಸಂಖ್ಯೆಯಲ್ಲಿರುವುದೂ ಉಂಟು. ಕೇಸರಗಳು 8, ಬಿಡಿಬಿಡಿಯಾಗಿವೆ. ಅಂಡಾಶಯ ಉಚ್ಚ ಸ್ಥಾನದ್ದು ; 3 ಕಾರ್ಪೆಲುಗಳಿಂದ ರಚಿತವಾಗಿದೆ. ಇದರಲ್ಲಿ 3 ಕೋಣೆಗಳೂ ಒಂದೊಂದರಲ್ಲಿ ಒಂದೊಂದೇ ಅಂಡಕವೂ ಇವೆ.

	ಟ್ರೋಪೀಯಲಮಿನಲ್ಲಿ ಸುಮಾರು 40 ಪ್ರಭೇದಗಳುಂಟು. ಇವೆಲ್ಲವೂ ದಕ್ಷಿಣ ಅಮೆರಿಕದ ಮೂಲವಾಸಿಗಳು. ಇವುಗಳಲ್ಲಿ ಬಲುಮುಖ್ಯವಾದುವು ಮೈನಸ್, ಮೇಜಸ್, ಪಾಲಿಫಿಲಮ್, ಸ್ಪೀಷಿಯೋಸಮ್, ಟ್ಯೂಬರೋಸಮ್, ಪೆಂಟಫಿಲಮ್, ಟ್ರೈಕಲರ್ ಮತ್ತು ಆಡಂಕಮ್ ಎಂಬುವು. ಇವನ್ನು ಯಾವ ತೆರನ ಮಣ್ಣಿನಲ್ಲಾದರೂ ಬೆಳೆಯಬಹುದು. ಇವುಗಳ ಬೆಳವಣಿಗೆಗೆ ಹೆಚ್ಚು ಆರೈಕೆಯೂ ಬೇಕಿಲ್ಲ. ಅಲ್ಲದೆ ಮಿತಿಮೀರಿದ ಮೊತ್ತದಲ್ಲಿ ಗೊಬ್ಬರ ಹಾಕಿದರೆ ಹೂಗಳಿಗಿಂತ ಎಲೆಗಳೇ ಸಮೃದ್ಧವಾಗಿ ಬೆಳೆಯುವುವು. ಮೈನಸ್ ಮತ್ತು ಮೇಜಸ್ ಪ್ರಭೇದಗಳ ಎಳೆಯ ಕಾಯಿ ಮತ್ತು ಬೀಜಗಳಿಂದ ಉಪ್ಪಿನಕಾಯಿ ತಯಾರಿಸುವುದುಂಟು. ಕೆಲವೆಡೆ ಎಲೆಗಳನ್ನು ಕೋಸಂಬರಿಯಾಗಿ (ಸ್ಯಾಲಡ್) ಬಳಸುವುದಿದೆ. ಟ್ಯೂಬರೋಸಮ್ ಪ್ರಭೇದದ ಬೇರುಗಳು ತಿನ್ನಲು ಯೋಗ್ಯವಾಗಿವೆ. 
(ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ